NEW

2025-26 ನೇ ಸಾಲಿನ ಪಿಚ್.ಡಿ ಕೋರ್ಸ್ ವರ್ಕ್ ನ(Ph.D Course Work) ಪರೀಕ್ಷಾ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪ್ರಥಮ ಸೆಮಿಸ್ಟರ್ ಪ್ರವೇಶಾತಿಯ ಖಾಲಿ ಸೀಟುಗಳ ಕೌನ್ಸಿಲಿಂಗ್ ದಿನಾಂಕ ಬದಲಿಸಲಾಗಿರುವ ಕುರಿತು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಎಲ್ಲ ಅಧೀನ ಹಾಗೂ ಸಂಲಗ್ನ ಮಹಾವಿದ್ಯಾಲಯಗಳಲ್ಲಿ ಯುವ ರೆಡ್ ಕ್ರಾಸ್ ಘಟಕಗಳನ್ನು ಪ್ರಾರಂಭಿಸುವ ಕುರಿತು. Fee Structure Prescribed for Various PG Courses (First Year) offered in the Private Affiliated Colleges for the Academic Year 2026-27 Fee Structure Prescribed for Various PG Courses (First Year) offered in the Government Colleges for the Academic Year 2026-27 Fee Structure Prescribed for Various PG Courses (First Year) offered in the University Main Campus for the Academic Year 2026-27 CYBEROMEGA IT LLP ಸಂಸ್ಥೆಯ ವತಿಯಿಂದ ಸ್ನಾತಕ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಯೆಗಾರಿಕೆ ಹಾಗು ಶೈಕ್ಷಣಿಕ ಕಾರ್ಯಚಟುವಟಿಕೆಗಳ ತರಬೇತಿ ಕುರಿತು

ಶಿಕ್ಷಣದಿಂದ ಮಾತ್ರ ಮಹಿಳೆಯರ ಬದುಕು ಉದ್ದಾರ : ಡಾ. ಗೌರಿ ಮಣಿಕ್ ಮಾನಸ

ರಾಯಚೂರು : ಮಹಿಳೆಯರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುವೆ. ಆದರೂ ಮಹಿಳಾ ಸಮಾನತೆ ಪರಿಪೂರ್ಣವಾಗಿ ಸಾಧ್ಯವಾಗಿಲ್ಲ. ಶಿಕ್ಷಣದಿಂದ ಮಾತ್ರ ಮಹಿಳೆಯರ ಬದುಕು ಉದ್ದಾರಗೊಳ್ಳುವುದು ಎಂದು ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಗೌರಿ ಮಣಿಕ್ ಮಾನಸ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಮಹಿಳಾ ವಿಭಾಗದಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಅವರು ಮಾತನಾಡಿ, ಹೆಣ್ಣ ಮಕ್ಕಳು ಬಲಹೀನರು ಎನ್ನುವ ಅಪವಾದಗಳಿವೆ. ಆದರೆ, ಅದು ತಪ್ಪು. ಎಲ್ಲ ರಂಗಗಳಲ್ಲೂ ಮಹಿಳೆಯರು ಕ್ರೀಯಾಶೀಲರಾಗಿದ್ದಾರೆ ಎಂದರು.
ಮಹಿಳೆಯರು ಕಾನೂನುಬದ್ಧವಾಗಿ ಶಿಕ್ಷಣ ಕಲಿಯಲು ಸಾಧ್ಯವಾಗಿದ್ದು ಸಂವಿಧಾನದಿಂದ. ಅದನ್ನು ರೂಪಿಸಿದ ಬಾಬಾ ಸಾಹೇಬ ಅಂಬೇಡ್ಕರ್‌ರನ್ನು ಹೆಣ್ಣು ಮಕ್ಕಳು ಯಾವಾಗಲೂ ನೆನೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ನಮ್ಮ ಸಮಾಜದಲ್ಲಿ ಹೆಣ್ಣನ್ನು ಅಧೀನಗೊಳಿಸುವ ಪ್ರಕ್ರಿಯೆ ಅನಾದಿಕಾಲದಿಂದಲೂ ಇದೆ. ಹೆಣ್ಣನ್ನು ಚಂಚಲಳು, ದುರ್ಬಲಳು ಎಂದು ನಂಬಿಸುತ್ತ ಬರಲಾಗಿದೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಶೋಷಣೆಗೊಳಗಾಗುತ್ತಲೇ ಇದ್ದಾಳೆ ಎಂದು ಕಳವಳ ವ್ಯಕ್ತಪಡಿಸಿದರು.
ಪುರುಷರು ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಮಹಿಳೆ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಅವಳ ಕೈಕೆಳಗೆ ಕೆಲಸ ಮಾಡುವ ಪುರುಷ ಅಧಿಕಾರಿಗಳು ಹೆಣ್ಣಿನ ನೆಲೆಯಲ್ಲೇ ಅವಳನ್ನು ಪರಿಭಾವಿಸುತ್ತಾರೆ. ಇದು ತೊಲಗಬೇಕು. ಹೆಣ್ಣು ಕೊಡುವ ಪ್ರೀತಿ ಎಂಥ ಕ್ರೂರಿಯನ್ನೂ ಮನುಷ್ಯನನ್ನಾಗಿಸುವುದು ಎಂದು ಅಭಿಪ್ರಾಯಪಟ್ಟರು.
ಕುಲಸಚಿವ (ಆಡಳಿತ) ಡಾ. ಎ. ಚನ್ನಪ್ಪ ಮಾತನಾಡಿ, ಸಮಾಜದಲ್ಲಿ ಅನೇಕ ಭೇದಗಳಿವೆ. ಅದರಲ್ಲಿ ಲಿಂಗಭೇದವೂ ಒಂದು. ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಶ್ರೇಷ್ಠವಾದುದು. ಅತ್ಯಂತ ಕೆಟ್ಟದು ಎಂದರೆ ಅಜ್ಞಾನ. ಅಜ್ಞಾನದಿಂದಲೇ ಇಂಥ ಭೇದ ಭಾವಗಳು ಉಂಟಾಗುತ್ತಿವೆ. ಹೆಣ್ಣು-ಗಂಡು ಒಂದೇ ಭಾವದಿಂದ ಬದುಕಬೇಕು. ಆಗ ಸಮರಸದ ಜೀವನ ಸಾಧ್ಯ ಎಂದು ಹೇಳಿದರು.
ಉಪಕುಲಸಚಿವ ಡಾ.ಕೆ.ವೆಂಕಟೇಶ್ ಮಾತನಾಡಿ, ಗಂಡಸರು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲವಿದು. ನಾವೆಲ್ಲ ಸ್ತ್ರೀಕುಲದ ಋಣಭಾರದಲ್ಲಿದ್ದೇವೆ. ಹೆಣ್ಣಿಗೆ ಅಧಿಕಾರವನ್ನು ನಿರಾಕರಿಸಿದ ಈ ದೇಶದಲ್ಲಿ ಡಾ.ಅಂಬೇಡ್ಕರ್ ಅವರು ಹಿಂದು ಕೋಡ್‌ಬಿಲ್ ಜಾರಿಗೊಳಿಸಿ ಮಹಿಳೆಯರ ಬದುಕಲ್ಲಿ ತುಸುವಾದರೂ ಬೆಳಕು ಬರಲು ಕಾರಣರಾದರು. ನಾವು ಈಗ ರಕ್ತ, ಕಣ್ಣೀರು ಮತ್ತು ಬೆವರುಗಳಿಂದ ಮಹಿಳೆಯರನ್ನು ಬಿಡುಗಡೆಗೊಳಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಐವರು ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಾನವಿಯ ಡಾ. ಅಂಬಿಕಾ ಮಧುಸೂದನ್ ನಾಯಕ್, ಕವಿತಾಳದ ಬರ‍್ರಕಥಾ ಕಲಾವಿದೆ ಅಯ್ಯಮ್ಮ ಯಡವಲ್, ರಾಯಚೂರಿನ ಹಣ್ಣು ವ್ಯಾಪಾರಿ ಜಿ.ಮಂಗಮ್ಮ, ಉದ್ಬಾಳದ ಮದ್ಯನಿಷೇಧ ಹೋರಾಟಗಾರ್ತಿ ವಿರೂಪಮ್ಮ, ರಾಯಚೂರಿನ ಪೌರಕಾರ್ಮಿಕರಾದ ಸುಶೀಲಮ್ಮ ಅವರನ್ನು ಗೌರವಿಸಲಾಯಿತು.
ನಂತರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಿಂಡಿಕೇಟ್ ಸದಸ್ಯರಾದ ಜಿಶಾನ್ ಅಖಿಲ್ ಸಿದ್ಧಕಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್.ಲತಾ ಅವರು ಮಾತನಾಡಿದರು. ವಿವಿಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಪಾರ್ವತಿ ಪಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ಎನ್.ಎಸ್.ಎಸ್.ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಹಿರಿಯ ಪ್ರಾಧ್ಯಾಪಕ ಪ್ರೊ. ಪಿ.ಭಾಸ್ಕರ್, ಉಪನ್ಯಾಸಕರಾದ ಡಾ.ಭೀಮೇಶ, ಡಾ.ಶಾಂತದೇವಿ, ಡಾ. ಅನಿಲಕುಮಾರ್, ಡಾ.ಅಶೋಕ ಭಾಗವಹಿಸಿದ್ದರು. ಉಪನ್ಯಾಸಕಿ ಡಾ. ಗೀತಾ ಗೋಪಾಲಕೃಷ್ಣ ನಿರೂಪಿಸಿದರು. ಉಪನ್ಯಾಸಕಿ ಡಾ. ಗೀತಮ್ಮ ವಂದಿಸಿದರು. ವಿದ್ಯಾರ್ಥಿನಿ ಸ್ನೇಹಾ ಚವ್ಹಾಣ ಹೋರಾಟದ ಗೀತೆ ಹಾಡಿದರು. ವಿದ್ಯಾರ್ಥಿನಿಯರು ಲಂಬಾಣಿ ನೃತ್ಯ, ಡೊಳ್ಳು ಕುಣಿತ ಪ್ರದರ್ಶಿಸಿದರು.