
ರಾಯಚೂರು,ಮಾ.೨೩- ಶರಣ ಪರಂಪರೆಯಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ದೇವರ ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಮುದನೂರಿನವರು ಇವರು ೧೧ ನೇ ಶತಮಾನದ ಆದ್ಯ ವಚನಕಾರ, ಕಾಯಕ ಯೋಗಿ, ವಚನ ಸಾಹಿತ್ಯದ ಆದ್ಯಪ್ರವರ್ತಕರಾಗಿದ್ದು, ಅವರ ವಚನಗಳು ಇಂದಿಗೂ ಸಾಮಾಜಿಕ ಮತ್ತು ಕಾಯಕದ ಮಹತ್ವವನ್ನು ಸಾರುವುದಲ್ಲದೇ ಅನುಭವ ಮತ್ತು ಅನುಭಾವದ ದೃಷ್ಟಿಕೋನಗಳನ್ನು ಹೊಂದಿವೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರ
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗದಲ್ಲಿಂದು ದೇವರ ದಾಸಿಮಯ್ಯನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನಿಗೂ ಮುನ್ನವೇ ವಚನಗಳನ್ನು ರಚಿಸಿದ ಕನ್ನಡದ ಮೊದಲ ವಚನಕಾರರಲ್ಲಿ ದೇವರ ದಾಸಿಮಯ್ಯ ಒಬ್ಬರು ಬಂಡುಗುಳಿ ಕೇಶಿರಾಜ, ಜಗದುಜಂಬಯ್ಯ, ಮಾದರಚನ್ನಯ್ಯ, ಕಕ್ಕಯ್ಯ, ಶಂಕರದಾಸಿಮಯ್ಯ ಇವರುಗಳ ಸಮಕಾಲಿನವರಾಗಿದ್ದರು. ಶೈವ, ವೈದಿಕ, ವೀರಶೈವ ಎಂಬ ಮತಾಂತರ ಕಾಲಘಟ್ಟದಲ್ಲಿ ಇರುವ ಇವರು, ಶರಣ ಪರಂಪರೆಯಲ್ಲಿ ಬರುವ ಅನುಭಾವ ಅನ್ನುವ ಪದವನ್ನು ಮೊಟ್ಟಮೊದಲಿಗೆ ಬಳಸಿದಂತಹ ವ್ಯಕ್ತಿಯಾಗಿದ್ದಾರೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವುದನ್ನು ವಿಮರ್ಶಾತ್ಮಕವಾಗಿ ಹೇಳಿದ್ದಾರೆ. ಒಂದು ಸಮಾನತೆಯ ಆಶಯವನ್ನು ಗಂಡು ಮತ್ತು ಹೆಣ್ಣು ಬೇರೆಯಲ್ಲ ಎಂದು ಹೇಳಿದವರು. ಮೊಲೆ ಮುಡಿ ಬಂದಡೆ ಹೆಣ್ಣೆಂಬರು ಗಡ್ಡ ಮೀಸೆ ಬಂದಡೆ ಗಂಡೆAಬರು ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಎನ್ನುವ ಮಾರ್ಮಿಕವಾದ ತಾತ್ವಿಕತೆಯನ್ನು ಬಿಂಬಿಸಿದವರು. ತೆರಿಗೆಗಳನ್ನು ಕಟ್ಟುವ ನಿಲುವಿನಲ್ಲಿ ತಮ್ಮದಲ್ಲದ ದೇವರುಗಳಿಗೆ ದೇವಸ್ಥಾನಗಳಿಗೆ ಹೋಗುವುದನ್ನು ಅವರು ಹೇಳಿದರು. ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಬೀಸುವ ಅದು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ನೀವೆಂತು ನಂಬಿರೆ ಅಂತ ಹೇಳಿ ಇಡೀ ವೈದಿಕಕ್ಕೆ ಬಹುದೊಡ್ಡ ಏಟು. ಈ ರೀತಿಯಾಗಿ ಕಾಯಕ ಜೀವಿಯಾಗಿ ಸಮಾನತೆಯ ಆಶಯಗಳನ್ನು ಹೇಳವಂತಹ ಇವರು ಹೊಲೆಯ ಜಾತಿಯ ಬಗ್ಗೆ ಮಾತನಾಡುವವರ ಕುರಿತು ಆಕ್ರೋಶಭರಿತವಾಗಿ ಮಾತನಾಡುತ್ತಾರೆ. ಹೊಲೆಯರ ಬಾವಿಯಲೊಂದು ಎಲು ನಟ್ಟಿದ್ದಡೆ ಹೊಲೆಯೆಂಬು ಲೋಕವೆಲ್ಲ ಎಂದು ಹೇಳುವಿರಿ ಬಾಯಿತುಂಬಾ ಎಲುಬುಗಳನ್ನು ಹೊತ್ತಿದ್ದೀರಿ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಮಾರ್ಮಿಕವಾಗಿ ಹೇಳಿದ ವಚನಕಾರ. ವಾಸ್ತವಿಕವಾಗಿ ಮುಖಾಮುಖಿಯಾಗಿ ಮಾತುಗಳನ್ನು ಹೇಳುವ ಶ್ರೇಷ್ಠ ವಚನಕಾರ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ ಎಳೆಎಳೆಯಾಗಿ ಬಿಡಿಸಿ ತೋರಿಸಿದ ದೇವರ ದಾಸಿಮಯ್ಯ ಮತ್ತು ಅವರ ವಚನಗಳು ಇಂದಿಗೂ ಆದರ್ಶಪ್ರಾಯ ಎಂದು ಅವರು ಹೇಳಿದರು.
ವಿವಿಯ ಹಣಕಾಸು ಅಧಿಕಾರಿ ಗಾಯತ್ರಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್, ವಾಣಿಜ್ಯ ನಿಕಾಯದ ಡೀನರಾದ ಪ್ರೊ.ಪಿ.ಭಾಸ್ಕರ್, ಕಲಾ ನಿಕಾಯದ ಡೀನರಾದ ಡಾ.ಲತಾ.ಎಂ.ಎಸ್., ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಕುಲಸವರಾದ ಡಾ.ಕೆ.ವೆಂಕಟೇಶ್ ಸ್ವಾಗತಿಸಿ ವಂದಿಸಿದರು.